ಏರಿ: ಸುತ್ತಲಿನ ನೆಲದ ಮಟ್ಟಕ್ಕಿಂತ ಎತ್ತರವಾಗಿ ಮಣ್ಣು ಇಲ್ಲವೆ ಕಲ್ಲಿನಿಂದ ಕಟ್ಟಿರುವ ರಚನೆ (ಡೈಕ್). ಇದು ತ್ರಾಪಿಜ್ಯದ ಆಕಾರದಲ್ಲಿದೆ; ಎಂದರೆ ಬುಡ ಅಗಲ, ಮೇಲೆ ಕಿರಿದು. ಏರಿಯನ್ನು ಕಟ್ಟುವುದರಲ್ಲಿನ ಉದ್ದೇಶಗಳು ಹಲವಾರು. ಪ್ರಾಚೀನ ಈಜಿಪ್ಟಿನಲ್ಲಿ ಪ್ರ.ಶ.ಪು. 4,000ದ ಸುಮಾರಿನಲ್ಲಿ ನೈಲ್ ನದಿಯ ದಡಗಳ ಮೇಲೆ ಸಮಾಂತರವಾಗಿ ಕಿಲೋಮೀಟರುಗಳ ಏರಿಗಳನ್ನೂ ಅವುಗಳಿಗೆ ಸಮಕೋನವಾಗಿ ಸಣ್ಣ ಏರಿಗಳನ್ನೂ ಕಟ್ಟಿ ತೊಟ್ಟಿಗಳಲ್ಲಿ ಹೇಗೋ ಹಾಗೆ ಏರಿಗಳ ಮಧ್ಯೆ ಪ್ರವಾಹದ ನೀರನ್ನು ನಿಲ್ಲಿಸುವ ಏರ್ಪಾಡು ಇತ್ತು. ದೊಡ್ಡ ಏರಿಗಳಲ್ಲಿ ಬಾಗಿಲುಗಳಿಂದ ಮುಚ್ಚಬಹುದಾದ ತೂಬುಗಳನ್ನಿಟ್ಟು ಅವುಗಳಿಂದ ಬೇಕಾದಾಗ ತೊಟ್ಟಿಗಳೊಳಕ್ಕೆ ನೀರನ್ನು ಬಿಡಬಹುದಿತ್ತು. ಈ ನೀರಿನಲ್ಲಿದ್ದ ಫಲವತ್ತಾದ ಗೋಡುಮಣ್ಣು ಆಹಾರ ಧಾನ್ಯಗಳನ್ನು ವಿಶೇಷವಾಗಿ ಬೆಳೆಸಲು ಉಪಯೋಗಕಾರಿ. ಇದರಿಂದಾಗಿ ಪ್ರ.ಶ.ಪು. ಒಂದನೆಯ ಶತಮಾನದಲ್ಲಿ ಈಜಿಪ್ಟ್‌ ದೇಶ ರೋಮನ್ ಚಕ್ರಾಧಿಪತ್ಯದ ಉಗ್ರಾಣವೆನಿಸಿಕೊಂಡಿತ್ತು.

ಸಮುದ್ರ, ಹೊಳೆ ಇಲ್ಲವೆ ಪ್ರವಾಹದ ನೀರು ಊರಿನೊಳಕ್ಕೆ ನುಗ್ಗದ ಹಾಗೆ ಏರಿ ತಡೆಯುತ್ತದೆ. ಹಾಲೆಂಡ್, ಇಂಗ್ಲೆಂಡಿನ ಫೆನ್ ಪ್ರಾಂತ್ಯ, ಅಮೆರಿಕದಲ್ಲಿ ಮಿಸಿಸಿಪಿ ನದಿಯ ಕೆಳಕಣಿವೆ ಮತ್ತು ಚೀನದ ತಗ್ಗಾದ ಪ್ರದೇಶ-ಇಲ್ಲೆಲ್ಲ ಪ್ರವಾಹದ ನೀರನ್ನು ಹೊರಕ್ಕೆ ಸಾಗಿಸಲು ಏರಿಗಳನ್ನೂ ಎರಡು ದಡಗಳಲ್ಲಿಯೂ ಕಟ್ಟುತ್ತಾರೆ. ಹಾಲೆಂಡಿನ ಆರ್ಥಿಕ ಜೀವನ ನಿಂತಿರುವುದೇ ಈ ಏರಿಗಳಿಂದ-ಸಮುದ್ರದ ತೀರದಲ್ಲಿ ದೊಡ್ಡ ಏರಿಗಳನ್ನೂ ಕಟ್ಟೆಗಳನ್ನೂ ಒಳನಾಡಿನಲ್ಲಿ ನೂರಾರು ಕಿಲೋಮೀಟರುಗಳ ಏರಿಗಳನ್ನೂ ಅಪಾರವಾದ ವೆಚ್ಚದಿಂದ ಕಟ್ಟಿ ಅವನ್ನೇ ಜಾಗರೂಕತೆಯಿಂದ ರಕ್ಷಿಸುವುದರ ಮೂಲಕ. ಇವುಗಳಲ್ಲಿ ಒಂದು ಏರಿಯ ಉದ್ದ 3,600 ಮೀ ಎತ್ತರ 7 ಮೀ ಚಪ್ಪಟೆಯಾದ ಇಳಿಕಲಿನ ಉದ್ದ 90 ಮೀ ಇದನ್ನು ಕಾಂಕ್ರೀಟಿನ ದಿಮ್ಮಿಗಳಿಂದ ಭದ್ರಪಡಿಸಿದ್ದಾರೆ. ಈ ಏರಿಯ ಮೇಲೆ ಒಂದು ರಸ್ತೆ ಮತ್ತು ಒಂದು ರೈಲು ಮಾರ್ಗ ಸಹ ಇವೆ.

ಯುರೋಪಿನಲ್ಲಿ ಹಿಂದಿನ ಕಾಲದಲ್ಲಿ ಸಣ್ಣ ರಾಷ್ಟ್ರಗಳ ಗಡಿಗಳನ್ನು ಗುರುತು ಮಾಡುವುದಕ್ಕಾಗಿ ಒಂದೆರಡು ಕಿಲೋಮೀಟರುಗಳಿಂದ ನೂರಾರು ಕಿಲೋಮೀಟರುಗಳವರೆಗೂ ಏರಿಗಳನ್ನು ಹಾಕುತ್ತಿದ್ದರು. ಗಡಿಯ ಅಂಚಿನಲ್ಲಿ ಮಣ್ಣನ್ನು ತೋಡಿ ಅದನ್ನೇ ತಮ್ಮ ರಾಷ್ಟ್ರದ ಕಡೆಗೆ ಏರಿಯ ಹಾಗೆ ತುಂಬುತ್ತಿದ್ದರು. ಹೀಗೆ ಉಂಟಾದ ಕಂದಕಗಳಲ್ಲಿ ಕ್ರಮೇಣ ಮಳೆಯ ನೀರು ನಿಂತು ಅವು ಶತ್ರುಗಳಿಗೆ ದುರ್ಗಮ ಪ್ರದೇಶಗಳಾಗುತ್ತಿದ್ದುವು. ಇಂಥ ಏರಿಗಳು ಹಳ್ಳಗಳ ಮೇಲೂ ಗುಡ್ಡಗಳ ಮೇಲೂ ಬಳಸಿಕೊಂಡು ಹೋಗಿ ದೇಶಕ್ಕೆ ಸುಲಭರಕ್ಷಣೆ ಒದಗಿಸುತ್ತಿದ್ದುವು. 

ತಮ್ಮ ಆಡಳಿತದಲ್ಲಿ ಇದ್ದಾಗ ರೋಮನರು ಬ್ರಿಟನ್ನಿನಲ್ಲಿ ಇಂಥ ಹಲವಾರು ಏರಿಗಳನ್ನು ಕಟ್ಟಿದ್ದರು. ಇದೇ ಮಾದರಿಯಲ್ಲಿ ಮುಂದಿನ ಶತಮಾನಗಳಲ್ಲಿಯೂ ಏರಿಗಳು ನಿರ್ಮಾಣವಾದುವು.
ಕೆಲವು ದೇಶಗಳಲ್ಲಿ ಶತ್ರುಗಳ ದೆಸೆಯಿಂದ ರಾಜ್ಯವನ್ನು ರಕ್ಷಿಸಿಕೊಳ್ಳಲು ಏರಿಗಳನ್ನು ಕಟ್ಟುತ್ತಾರೆ. ಯುರೋಪಿನಲ್ಲಿ ಒಂದು ಯುದ್ಧದಲ್ಲಿ ಉದ್ದೇಶಪುರ್ವಕವಾಗಿ ಏರಿಯನ್ನು ಒಡೆದು ಕೂಡಿಟ್ಟ ನೀರನ್ನು ಒತ್ತಿಬರುತ್ತಿದ್ದ ಶತ್ರುಗಳ ಮೇಲೆ ನುಗ್ಗಿಸಿ ಅವರನ್ನು ಕೊಂದು ದೇಶರಕ್ಷಣೆ ಮಾಡಿಕೊಂಡರು. ಎರಡನೆಯ ಮಹಾಯುದ್ಧದಲ್ಲಿ ಎಷ್ಟೋ ಸಾರಿ ಶತ್ರುಗಳು ಒಡೆದಿದ್ದ ಏರಿಗಳನ್ನು ಮತ್ತೆ ಪ್ರವಾಹ ಬರುವುದಕ್ಕೆ ಮುಂಚೆ ಆತುರವಾಗಿ ಪುನರ್ನಿರ್ಮಾಣ ಮಾಡಿ ನೀರನ್ನು ತುಂಬಿಸಬೇಕಾಯಿತು.

ಹರಿಯುವ ನೀರಿನ ಪ್ರವಾಹವನ್ನು ತಡೆಯುವುದಕ್ಕಾಗಿಯೂ ಏರಿಗಳನ್ನು ಕಟ್ಟಬೇಕಾಗುತ್ತದೆ. ಹೊಳೆಯನ್ನೋ ನಾಲೆಯನ್ನೋ ಒಂದು ಗಡಿಯ ಆಚೆಗೆ ಹೋಗದಂತೆ ಏರಿಗಳು ತಡೆಯುತ್ತವೆ. ಪ್ರವಾಹದಲ್ಲಿ ಮುಳುಗಿ ಹೋಗುವ ಭೂಮಿಯಲ್ಲಿ ನೆಲದ ಮಟ್ಟದ ಮೇಲೆ ಏರಿಗಳನ್ನು ಕಟ್ಟಿ ನೀರನ್ನು ನಾಲೆಗಳ ಮೂಲಕ ಹರಿಸುತ್ತಾರೆ. ಸಮುದ್ರತೀರದಲ್ಲಿಯೂ ಅಳಿವೆಗಳ ಬಾಯಲ್ಲಿಯೂ ಇರುವ ಏರಿಗಳು ಕರಾವಳಿ ಕೊರೆದುಹೋಗದಂತೆ ಕಾಪಾಡುತ್ತವೆ. ಭೂಮಿಯನ್ನು ಮರುಪಡೆವ ಯೋಜನೆಗಳಲ್ಲಿ ಏರಿಗಳ ಜೊತೆಗೆ ಕಲ್ಲಿನ ಗೋಡೆಗಳೂ ಬೇಕಾಗಬಹುದು. 

ಹಳ್ಳಗಳಿಗೆ ಅಡ್ಡಲಾಗಿ ಮಣ್ಣಿನ ಏರಿಗಳನ್ನು ಕಟ್ಟಿ ಕೆರೆಗಳನ್ನು ನಿರ್ಮಿಸಿ ಕೂಡಿಟ್ಟ ನೀರನ್ನು ನೀರಾವರಿಗಾಗಿ ಬಳಸಿಕೊಳ್ಳುತ್ತಾರೆ. ಮಣ್ಣಿನ ಏರಿಗಳಲ್ಲಿ ನೀರು ಕೊಂಚವೂ ಸೋರದ ಹಾಗೆ ಮಾಡುವುದು ಕಷ್ಟ. ಜೇಡಿಮಣ್ಣು, ಕಾಂಕ್ರೀಟಿನ ತಡಿಕೆ ಗೋಡೆಗಳು ಇಲ್ಲವೆ ಉಕ್ಕಿನ ತಗಡಿನ ದಸಿಗಳನ್ನು ಅವಶ್ಯವಾದ ಕಡೆ ಉಪಯೋಗಿಸಿ ನೀರು ಸೋರದಂತೆ ತಡೆಯಬೇಕಾಗುತ್ತದೆ. ಪ್ರವಾಹದಿಂದ ಅಥವಾ ಅಲೆಗಳಿಂದ ನೀರಿನ ಕಡೆಯ ಇಳಿಕಲು ಕೊರೆಯದ ಹಾಗೆ ಕಲ್ಲು ಇಲ್ಲವೆ ಕಾಂಕ್ರೀಟಿನಿಂದ ಕಟ್ಟಣೆಯನ್ನು ಕಟ್ಟಬೇಕು.

ನದಿಗಳು ನಗರಗಳ ಮಧ್ಯದಲ್ಲಿ ಹರಿಯುವಾಗ ದಡಗಳ ಮೇಲೆ ಕಲ್ಲಿನ ಅಥವಾ ಕಾಂಕ್ರೀಟಿನ ಆಧಾರವನ್ನು ಕೊಟ್ಟು ಹಿಂದುಗಡೆ ಉದ್ದವಾದ ಮಣ್ಣಿನ ಏರಿಗಳಿಂದ ಪ್ರವಾಹಗಳ ಹಾವಳಿಯನ್ನು ತಪ್ಪಿಸುತ್ತಾರೆ. ಲಂಡನ್ ನಗರದಲ್ಲಿ ಥೇಮ್ಸ್‌ ನದಿಯ ಏರಿಯ ಮೇಲೆ ಅಗಲವಾದ ರಸ್ತೆಯನ್ನು ಮಾಡಿದ್ದಾರೆ. ಸಾಮಾನ್ಯವಾಗಿ ನದಿ ನಗರದ ಮಧ್ಯದಲ್ಲಿ ಹರಿದುಹೋದರೆ ಪ್ರವಾಹದ ಹಾವಳಿಯನ್ನು ಒಂದಲ್ಲ ಒಂದು ಸಾರಿ ಎದುರಿಸಲೇಬೇಕಾಗುತ್ತದೆ. 1923ನೆಯ ಇಸವಿಯಲ್ಲಿ ಬಂದ ತುಂಗಾನದಿಯ ಮಹಾ ಪ್ರವಾಹದಲ್ಲಿ ಶಿವಮೊಗ್ಗ ಪಟ್ಟಣ ವಿಶೇಷ 
ನಷ್ಟವನ್ನನುಭವಿಸಿತು. ಹೀಗೆ ಹೈದರಾಬಾದ್ ಮತ್ತು ಪುನ ನಗರಗಳಲ್ಲಿ ನದಿಗಳು ವಿಶೇಷ ಅನಾಹುತವನ್ನುಂಟು ಮಾಡಿವೆ. ಇಂಥ ಸಂದರ್ಭಗಳಲ್ಲಿ ಎರಡು ದಡಗಳಲ್ಲಿಯೂ ಭದ್ರವಾದ ಏರಿಗಳನ್ನು ಕಟ್ಟಬೇಕಾಗುತ್ತದೆ.

ಹಾಲೆಂಡ್ ತಗ್ಗಾದ ಭೂಪ್ರದೇಶ. ಆದ್ದರಿಂದ ನೆಲಕ್ಕೆ ನೀರು ನುಗ್ಗದಂತೆ ಏರಿಗಳು ಇಲ್ಲಿ ಅತ್ಯಾವಶ್ಯ. ಇಂಥ ಏರಿಗಳಿಗೆ ಡೈಕುಗಳೆನ್ನುತ್ತಾರೆ. ರೇವುಪಟ್ಟಣಗಳಲ್ಲಿ ಹಡಗಿನ ಭರ್ತಿ ಕಟ್ಟೆಯೂ (ಕ್ವೇ) ಒಂದು ಏರಿ. ಹೀಗೆ ಏರಿಯ ಉಪಯೋಗ ಸಾರ್ವತ್ರಿಕವಾಗಿದೆ.

ಏರಿಗಳು ಇತರ ಇಂಜಿನಿಯರಿಂಗ್ ಕಟ್ಟಡಗಳ ಭಾಗಗಳಾಗಿಯೂ ಇರಬಹುದು. ರೈಲ್ವೆಗಳು, ರಸ್ತೆಗಳು ಮತ್ತು ನಾಲೆಗಳು ತಗ್ಗಾದ ಭೂಮಿಯನ್ನು ದಾಟಿ ಒಂದೇ ಮಟ್ಟದಲ್ಲಿ ಹೋಗಬೇಕಾದಾಗ ಏರಿಗಳು ಆವಶ್ಯವಾಗುತ್ತವೆ. ಇಂಥ ಏರಿಗಳನ್ನು ಮಣ್ಣಿನಿಂದ ಕಟ್ಟಿ ಇಳಿಕಲಿನಲ್ಲಿ ಕಲ್ಲುಕಟ್ಟಣೆಯನ್ನು ಕಟ್ಟಬಹುದು. ಜೌಗು ನೆಲದ ಮೇಲೂ ಸರೋವರಗಳ ತಳದಲ್ಲಿಯೂ ನದಿಗಳ ಪ್ರವಾಹಗಳ ಬಂiÀÄಲುಗಳಲ್ಲಿಯೂ ರೈಲ್ವೆಗಳನ್ನೂ ರಸ್ತೆಗಳನ್ನೂ ಸಾಗಿಸಬೇಕಾದಾಗ ಏರಿಗಳು ಕುಸಿದು ಮಟ್ಟ ತಗ್ಗದಂತಿರಬೇಕು. ಆಗ ಏರಿಯ ಖರ್ಚು ಹೆಚ್ಚೋ ಸೇತುವೆಯ ಖರ್ಚು ಹೆಚ್ಚೋ ಎಂದು ನೋಡಬೇಕಾಗುತ್ತದೆ.

ಭಾರತದಲ್ಲಿ ಏರಿಯ ಉಪಯೋಗ ವಿಶೇಷವಾಗಿರುವುದು ನೀರಾವರಿಯ ಕೆರೆಗಳ ನಿರ್ಮಾಣದಲ್ಲಿ. ಹಳ್ಳಗಳಿಗೆ ಅಡ್ಡಲಾಗಿ ಮಣ್ಣಿನ ಏರಿಗಳನ್ನು ಕಟ್ಟಿ ನಿರ್ಮಿಸಿದ ಸಣ್ಣ ಜಲಾಶಯಗಳಿಗೆ ಕೆರೆಗಳು ಎನ್ನುತ್ತಾರೆ. ಏರಿ ಕೆರೆಯ ಒಂದು ಅಂಗ. ಮೊದಲಿಗೆ ಕೆರೆ ಎಂದರೆ ಏರಿ ಎಂದೇ ಅರ್ಥವಿತ್ತೆಂದು ತಿಳಿದು ಬಂದಿದೆ. ಕೆರೆ ತುಂಬಿದ ಮೇಲೆ ಹೆಚ್ಚಾಗಿ ಬಂದ ನೀರನ್ನು ಏರಿಗೆ ಅಪಾಯವಾಗದ ಹಾಗೆ ಹೊರಕ್ಕೆ ಸಾಗಿಸುವ ಕೋಡಿ ಮತ್ತು ಶೇಖರವಾದ ನೀರನ್ನು ಕೆರೆಯಿಂದ ಏರಿಯ ಮೂಲಕ ಹಿಂದುಗಡೆಗೆ ಸಾಗಿಸಲು ತೂಬು-ಇವು ಉಳಿದ ಅಂಗಗಳು. ತೂಬಿನಿಂದ ಹರಿಯುವ ನೀರನ್ನು ಸಾಗುವಳಿಯಾಗುವ ಜಮೀನುಗಳಿಗೆ, ನಾಲೆ ಸಾಗಿಸುತ್ತದೆ.

 ಮಣ್ಣಿನ ಏರಿಯ ನಮೂನೆಗಳು  
ಏರಿಯ ಪಾಶರ್ವ್‌ಗಳಲ್ಲಿ ಮಣ್ಣನ್ನು ಮೂರು ವಿಧವಾಗಿ ತುಂಬಬಹುದು : 1 ಎಲ್ಲ ಕಡೆಯಲ್ಲಿಯೂ ಒಂದೇ ವಿಧವಾದ ಮಣ್ಣನ್ನು ತುಂಬುವುದು; 2 ಮಧ್ಯದಲ್ಲಿ ಜಿಗುಟಾದ ಮಣ್ಣನ್ನು ತುಂಬಿ ಹೊರಗಡೆ ಎರಡು ಪಕ್ಕಗಳಲ್ಲಿಯೂ ನೀರು  ಜಿನುಗಬಹುದಾದ ಹರಳುಮಣ್ಣನ್ನು ತುಂಬುವುದು; 3 ಒಳಗಡೆ ನೀರು ಜಿನುಗಲಾರದ ಜೇಡಿಮಣ್ಣು ಇಲ್ಲವೆ ಕಲ್ಲುಗಾರೆಯ ಗೋಡೆಯನ್ನು ಮಧ್ಯದಲ್ಲಿ ಕಟ್ಟಿ, ಸುತ್ತಲೂ ಒಂದೇ ವಿಧವಾದ ಮಣ್ಣನ್ನು ತುಂಬುವುದು. ಇವುಗಳ ವಿವರಗಳನ್ನು ಮುಂದೆ ಹೇಳಿದೆ.

 1. ಉತ್ತರ ಕರ್ನಾಟಕದ ಕೆಲವು ಭಾಗಗಳನ್ನೂ ಮುಂಬಯಿಯ ಕೆಲವು ಭಾಗಗಳನ್ನೂ ಬಿಟ್ಟು ಉಳಿದ ಕಡೆಗಳಲ್ಲಿ ಒಂದೇ ರೀತಿಯ ಮಣ್ಣನ್ನು ಉಪಯೋಗಿಸುವುದು ರೂಢಿ. ಕೆರೆಯ ಅಂಗಳದಲ್ಲಿ ಏರಿಯಿಂದ 15 ಮೀ ದೂರದಲ್ಲಿ 45-90 ಸೆಂಮೀ ಆಳ, 1.8 ಮೀ ಅಗಲ, 4.6-9.2 ಮೀ ಉದ್ದವಾದ ಗುಂಡಿಗಳನ್ನು ತೆಗೆದು ಮಣ್ಣನ್ನು ತಲೆಹೊರೆಯ ಮೇಲೆ ಏರಿಗೆ ಸಾಗಿಸಿ ಸಣ್ಣ ಕೆರೆಗಳನ್ನು ಕಟ್ಟುತ್ತಾರೆ. ಹೀಗೆ ಬೇರೆ ಬೇರೆಯ ಪ್ರದೇಶಗಳಲ್ಲಿ ಉಪಯೋಗಿಸುವ ಮಣ್ಣುಗಳಲ್ಲಿ ಬಹಳ ವ್ಯತ್ಯಾಸಗಳಿವೆ.

 2. ಮೇಲಿನ ಮಣ್ಣು 90-180 ಸೆಂಮೀ ವರೆಗೂ ಕರಿ ಹತ್ತಿಯ ಮಣ್ಣಾಗಿದ್ದು ಅದರ ಕೆಳಗೆ ಶಿಥಿಲವಾದ ಹಿಟ್ಟು ಬಂಡೆಯಿದ್ದರೆ ಈ ನಮೂನೆಯನ್ನು ಉಪಯೋಗಿಸಬೇಕು. ಬರಿಯ ಕಪ್ಪು ಮಣ್ಣಿನಿಂದಲೇ ಕಟ್ಟಿದ ಏರಿ ಒಣಗಿದಾಗ ಬಿರುಕುಬಿಡುತ್ತದೆ. ಕೆರೆಯಲ್ಲಿ ನೀರು ಕೆಳಕ್ಕೆ ಇಳಿದಾಗ ಈ ಬಿರುಕುಗಳು ಏರಿಯ ಹೊಟ್ಟೆಯವರೆಗೂ ಹೋಗುತ್ತವೆ. ಆಮೇಲೆ ಮಳೆ ಬಂದು ಕೆರೆ ಏಕಾಏಕಿ ತುಂಬಿದರೆ ಬಿರುಕುಗಳ ಮೂಲಕ ಒಳಕ್ಕೆ ನುಗ್ಗುವ ನೀರಿನಿಂದ ಕೆರೆಗೆ ವಿಪತ್ತು ಸಂಭವಿಸಬಹುದು. ಏರಿಯ ಮುಂಭಾಗ ನೆನೆದಾಗ ಜಾರುವ ಸಂಭವವೂ ಉಂಟು. ಹರಳು ಮಣ್ಣಿನಿಂದಲೇ ಏರಿಯನ್ನು ಕಟ್ಟಿದರೆ ನೀರು ಧಾರಾಳವಾಗಿ ಸೋರಿ ಹೋಗುತ್ತದೆ. ಜಿನುಗುವ ನೀರಿನ ವೇಗವೂ ಮಿತಿಮೀರಿ ಏರಿಗೆ ತೊಂದರೆಯಾಗಬಹುದು. ಆದರೆ ಏರಿಯ ಮಧ್ಯದಲ್ಲಿ ಜಿಗಟು ಮಣ್ಣನ್ನೂ ಪಕ್ಕಗಳಲ್ಲಿ ಹರಳು ಮಣ್ಣನ್ನೂ ಉಪಯೋಗಿಸಿದರೆ ಜಿಗಟು ಮಣ್ಣು ನೀರು ಜಿನುಗುವುದನ್ನು ತಪ್ಪಿಸುತ್ತದೆ. ಜಿಗಟು ಮಣ್ಣು ಒಣಗಿ ಬಿರುಕು ಬಿಡುವುದನ್ನು ಹೊರಗಡೆ ಇರುವ ಹರಳು ಮಣ್ಣು ತಪ್ಪಿಸುತ್ತದೆ. ಹೀಗೆ ಒಂದೊಂದು ಮಣ್ಣು ಅದರದರ ಗುಣಕ್ಕೆ ಸರಿಯಾಗಿ ಉಪಯೋಗವಾಗುತ್ತದೆ. ಮುಂಭಾಗದ ಹರಳುಮಣ್ಣಿನಲ್ಲಿ ನೀರು ನುಗ್ಗುವುದೇನೋ ಒಂದು ದೋಷ. ಇದ್ದದ್ದರಲ್ಲಿ ಜಿಗಟಾದ ಮಣ್ಣನ್ನೇ ಮುಂಭಾಗದಲ್ಲಿ ಸೇರಿಸಬೇಕು.

 3 ಈ ನಮೂನೆಗೂ 2 ನೆಯ ನಮೂನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಮಧ್ಯದಲ್ಲಿ ಜಿಗಟುಮಣ್ಣಿಗೆ ಬದಲಾಗಿ ಜೇಡಿಮಣ್ಣಿನ ಇಲ್ಲವೆ ಕಲ್ಲುಗಾರೆಯ ಕಿರಿದಾದ ಗೋಡೆಯಿರುತ್ತದೆ. ಇದರ ಮುಂಭಾಗದಲ್ಲಿ ಸಾಧ್ಯವಾದಷ್ಟು ನೀರು ಜಿನುಗದಂಥ ಮಣ್ಣನ್ನು ಹಾಕಬೇಕು. ಸಾಕಾದಷ್ಟು ಒಳ್ಳೆಯ ಮಣ್ಣು ಸಿಕ್ಕದೆ ಇರುವ ಕಡೆಗಳಲ್ಲಿ 2ನೆಯ ನಮೂನೆಯ ಜಿಗಟುಮಣ್ಣಿನ ನಡುವಿನ ಏರಿಯ ಜೊತೆಗೆ ನೀರು ಅಡಿಪಾಯದಲ್ಲಿ ಜಿನುಗದ ಹಾಗೆ ಜೇಡಿಮಣ್ಣಿನಿಂದ ತುಂಬಿದ ಕಂದಕವನ್ನಾದರೂ ಇಡಬಹುದು. ಮಣ್ಣಿನ ಏರಿಯ ಸಂವಿಧಾನವನ್ನು ಕಲ್ಲುಗಾರೆಯ ಕಟ್ಟೆಯ 
ಹಾಗೆ ಲೆಕ್ಕಾಚಾರದಿಂದ ಗೊತ್ತು ಮಾಡುವುದು ಸಾಧ್ಯವಿಲ್ಲ. ಅನುಭವದಿಂದಲೂ ಒಂದೊಂದು ಕಡೆಯೂ ದೊರೆಯುವ ಮಣ್ಣಿನ ಲಕ್ಷಣಗಳಿಂದಲೂ ಹೊಸ ಕೆರೆಯ ಏರಿಯ ಅಡ್ಡ ಕೊಯ್ತವನ್ನು ನಿರ್ಣಯಿಸಬೇಕು.

ಮಣ್ಣಿನ ಏರಿಗಳು ನಾಲ್ಕು ವಿಧಗಳಲ್ಲಿ ಉರುಳಬಹುದು : 1. ಒಳಕ್ಕೆ ನೀರು ಜಿನುಗುವುದ ರಿಂದ; 2. ಏರಿಯ ಮಣ್ಣು ಜಾರುವುದರಿಂದ; 3. ನೀರಿನ ಅಲೆಗಳ ಕೊರೆತದಿಂದ; 4. ಏರಿಯ ಮೇಲೆ ನೀರು ಉರುಳುವುದರಿಂದ. ಇವುಗಳ ವಿವರ ಹೀಗಿದೆ:
 1. ಕೆರೆಯ ನೀರು ಏರಿಯ ಅಡಿಪಾಯದÀ ಕೆಳಗಿನಿಂದಲೂ ಏರಿಯ ಮಣ್ಣಿನಿಂದಲೂ ಜಿನುಗುವಾಗ ಜೊತೆಯಲ್ಲಿ ಮಣ್ಣಿನ ಕಣಗಳನ್ನು ಒಯ್ಯುತ್ತದೆ. ಆಗ ಡೊಗರುಗಳು ಪ್ರಾರಂಭವಾಗಿ ಹರಡಿ ಏರಿ ಕುಸಿಯುತ್ತದೆ. ಕೊನೆಯಲ್ಲಿ ನೀರು ಏರಿಯ ಮೇಲೆ ಹರಿದು ಮಣ್ಣನ್ನು ಕೊರೆದು ಏರಿಯನ್ನು ಉರುಳಿಸುತ್ತದೆ. ಜಿನುಗುವ ನೀರಿನ ದಾರಿ ಚಿಕ್ಕದಾಗಿದ್ದು, ನೀರಿನ ವೇಗ ಮಣ್ಣು ತಡೆಯಲಾರದ ಮಟ್ಟಕ್ಕೆ ಏರಬಹುದು. ಆಗ ಕೊಳವಿಯಲ್ಲಿ ನೀರು ಏರಿದ ಹಾಗೆ ಏರಿ ಉರುಳಬಹುದು.

 2. ಮಣ್ಣು ನಿಲ್ಲಬಹುದಾದ ಇಳಿಜಾರಿಗಿಂತ ಕಡಿದಾಗಿ ನಿಂತಾಗ ಏರಿ ಜಾರುತ್ತದೆ. ಜಿಗಟುಮಣ್ಣಿನಲ್ಲಿ ಘರ್ಷಣಶಕ್ತಿ ಮತ್ತು ಅಂಟಿಕೊಳ್ಳುವ ಶಕ್ತಿ ಅದರಲ್ಲಿನ ತೇವಕ್ಕೆ ತಕ್ಕಂತೆ ವ್ಯತ್ಯಾಸವಾಗುತ್ತವೆ. ಒಣಗಿರುವ ಜಿಗಟುಮಣ್ಣಿನಲ್ಲಿ ಎರಡು ಶಕ್ತಿಗಳೂ ಹೆಚ್ಚಾಗಿಯೇ ಇರುವುವು. ಸ್ವಲ್ಪವೇ ನೀರು ಬೆರೆತಾಗ ಅಂಟಿಕೊಳ್ಳುವ ಶಕ್ತಿ ಇನ್ನೂ ಹೆಚ್ಚಾಗುತ್ತದೆ. ಆದರೆ ಮತ್ತಷ್ಟು ನೀರು ಸೇರಿದರೆ ಎರಡು ಶಕ್ತಿಗಳೂ ಕಡಿಮೆಯಾಗುತ್ತವೆ. ನೆನೆದಾಗ ಜಿಗಟುಮಣ್ಣು ಕೆಸರಾಗುತ್ತದೆ. ನೀರೇ ಇಲ್ಲದೆ ಒಣಗಿದಾಗ ಬಿರಿಯುತ್ತದೆ. ಏರಿ ಜಾರದ ಹಾಗೆ ಇರ ಬೇಕಾದರೆ 
ಅದರ ಮಣ್ಣು ಯಾವ ಇಳಿಜಾರಿನಲ್ಲಿ ನಿಲ್ಲಬಹುದೋ ಅದನ್ನು ಪರೀಕ್ಷೆ ಮಾಡಿ ಏರಿಯ ಎರಡು ಮುಖಗಳನ್ನೂ ಅದಕ್ಕಿಂತ ಹೆಚ್ಚು ಚಪ್ಪಟೆಯಾಗಿ ಇಡಬೇಕು. ಹಿಂಭಾಗ ನೀರಿನಲ್ಲಿ ನೆನೆಯುವ ಹಾಗಿರಬಾರದು. ಹುಡಿಮಣ್ಣು ನಿಲ್ಲುವ ಇಳಿಜಾರಿಗಿಂತ ಈ ಮುಖ ಹೆಚ್ಚು ಚಪ್ಪಟೆಯಾಗಿರಬೇಕು.

 3. ಮುಂಭಾಗದಲ್ಲಿ ನೀರಿನ ಅಲೆಗಳು ಕೊರೆದಾಗ ಮಣ್ಣು ನೀರಿನಲ್ಲಿ ಕೊರೆದು ಹೋಗಿ ಮೇಲಿನ ಭಾಗ ಜಾರುತ್ತದೆ. ಹೀಗೆಯೇ ಆಗಿ ಏರಿಯ ಅಗಲವೇ ಕಿರಿದಾಗಿ ಕ್ರಮೇಣ ನೀರು ಏರಿಯ ಮೇಲೆ ಹರಿಯುತ್ತದೆ. ಮುಂಭಾಗದಲ್ಲಿ ಕಲ್ಲಿನ ಕಟ್ಟಡವನ್ನು ಕಟ್ಟುವುದರಿಂದ ಇದನ್ನು ತಡೆಯಬಹುದು.

 4. ಕೆರೆಯಲ್ಲಿ ನೀರಿನ ಮಟ್ಟ ಏರಿಯ ತಲೆಯ ಮಟ್ಟಕ್ಕಿಂತಲೂ ಮೇಲಕ್ಕೆ ಏರಿದಾಗ ಏರಿ ಕೊರೆದುಹೋಗಿ ಉರುಳುತ್ತದೆ. ಇದನ್ನು ತಪ್ಪಿಸಲು ನೀರು ಪರಮಾವಧಿಯ ಮಟ್ಟಕ್ಕಿಂತ ಮೇಲೆ ಕೆರೆಯಲ್ಲಿ ಏರದ ಹಾಗೆ ಕೋಡಿಯನ್ನು ದೊಡ್ಡದು ಮಾಡಬೇಕು. ಏರಿಯ ಮೇಲೆ ದನಕರುಗಳು ಓಡಾಡಿ ಮಳೆಯಲ್ಲಿ ನೆನೆದು ಏರಿ ಕುಗ್ಗದ ಹಾಗೆ ಆಗಾಗ ಭರ್ತಿ ಮಾಡುತ್ತಿರಬೇಕು.
ಚರಂಡಿಗಳು : ಕೆರೆಯ ನೀರು ಜಿನುಗಿದ್ದರಿಂದಾಗಲೀ ಮಳೆಯ ನೀರು ಏರಿಯ ಹಿಂಭಾಗದ ಮೇಲೆ ಬಿದ್ದು ಒದ್ದೆಯಾದ್ದರಿಂದಾಗಲೀ ಏರಿಯ ಒಳಗಡೆ ಸೇರಿಕೊಂಡ ನೀರನ್ನು ದಪ್ಪಕಲ್ಲಿನಿಂದ ತುಂಬಿದ ಚರಂಡಿಗಳ ಮೂಲಕ ಹೊರಕ್ಕೆ ಸಾಗಿಸಬೇಕು.

 ಏರಿಗಳ ಕಟ್ಟಡ 
ಏರಿಯ ಕಟ್ಟಬೇಕಾದ ಸ್ಥಳವೂ ಅದರ ಅಳತೆಗಳೂ ನಿಶ್ಚಯವಾದ ಮೇಲೆ ಏರಿಯ ಅಡಿಪಾಯವನ್ನು 90-120 ಸೆಂಮೀ ಆಳವಾಗಿ ತೆಗೆದು ತಳವನ್ನು ಒರಟಾಗಿರುವ ಹಾಗೆ ಮಾಡಿ ನೀರನ್ನು ಚಿಮುಕಿಸಿ ಹೊಸ ಪರೀಕ್ಷೆ ಮಾಡಬೇಕು. ಇದ್ದುದರಲ್ಲಿ ಜಿಗಟಾದ ಮಣ್ಣನ್ನು ಏರಿಯ ಮಧ್ಯದಲ್ಲಿ ಹಾಕಬೇಕು. ಮೊದಲು ದೂರದ ಗುಂಡಿಗಳಿಂದ ಮಣ್ಣನ್ನು ಉಪಯೋಗಿಸಬೇಕು. ಏರಿಯ ಅಗಲದಲ್ಲಿ ಈ ಕೊನೆಯವರೆಗೂ ನಡುವಿನ ಕಡೆ ಕೊಂಚ ಇಳಿಜಾರಾಗಿ ಮಣ್ಣನ್ನು 15-25 ಸೆಂ. ಮೀ. ವರಸೆಗಳಲ್ಲಿ ಹಾಕಬೇಕು. ಈ ಮಣ್ಣನ್ನು ಸಣ್ಣ ಏರಿಗಳಲ್ಲಿ ಎಮ್ಮೆಗಳನ್ನೋ ದನಗಳನ್ನೋ ಓಡಿಸಿಯೂ ದೊಡ್ಡ ಏರಿಗಳಲ್ಲಿ ರೋಲರುಗಳಿಂದಲೂ ಅಡಕಿಸಬೇಕು. ಏರಿ ಪುರೈಸಿದ ಮೇಲೆ ಕೊಂಚ ತಗ್ಗುತ್ತದೆ. ಅದಕ್ಕಾಗಿ ಗಟ್ಟಿಯಾದ ಮಣ್ಣಿನಲ್ಲಿ 12 ಸೆಂಮೀ ಗೆ 1 ಸೆಂಮೀ ನಂತೆಯೂ ಸಾಧಾರಣ ಮಣ್ಣಿನಲ್ಲಿ 1.5 ಸೆಂಮೀ ನಂತೆಯೂ ಕರೀಮಣ್ಣಿನಲ್ಲಿ 2 ಸೆಂಮೀನಂತೆಯೂ ಹೆಚ್ಚು ಎತ್ತರವಾಗಿ ಏರಿಯನ್ನು ಕಟ್ಟಬೇಕು. ತಗ್ಗಿದ ಮೇಲೆ ಅದು ಸರಿಯಾದ ಎತ್ತರಕ್ಕೆ ಬರುತ್ತದೆ. ಒಂದು ವರ್ಷ ಮಾಡಿದ ಮಣ್ಣು ಕೆಲಸದ ಮೇಲೆ ಮಾರನೆಯ ವರ್ಷ ಕೆಲಸವನ್ನು ಪ್ರಾರಂಭಿಸುವಾಗ ಅಡ್ಡಕೊಯ್ತದಲ್ಲಿ ಮೆಟ್ಟಲಾಗಿಯೂ ಮಟ್ಟದಲ್ಲಿ ಹಲ್ಲು ಹಲ್ಲಾಗಿಯೂ ಹಳೆಯ ಮಣ್ಣು ಕೆಲಸವನ್ನು ಕತ್ತರಿಸಿ ಅದರೊಂದಿಗೆ ಬೆರೆಯುವಂತೆ ಹೊಸ ಮಣ್ಣನ್ನು ಹಾಕಬೇಕು. ಏರಿಯ ಮುಂಭಾಗ ನೀರಿನ ಅಲೆಗಳ ಹೊಡೆತದಿಂದ ಕೊರೆಯದ ಹಾಗೆ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಕಲ್ಲು ಕಟ್ಟಡವನ್ನು ಕಟ್ಟಬೇಕು.  (ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ